ನಮ್ಮನ್ನು ಸಾಮಜಿಕ ಜಾಲತಾಣದಲ್ಲಿ ಹಿಂಬಾಲಿಸಿ :

Krishi Vigyan Kendra Shivamogga

ಕೃಷಿ ವಿಜ್ಞಾನ ಕೇಂದ್ರ, ಶಿವಮೊಗ್ಗ

ಕೃಷಿಯಲ್ಲಿ ಅಭಿವೃದ್ಧಿಪಡಿಸಿದ ನವೀನ ತಂತ್ರಜ್ಞಾನಗಳನ್ನು ರೈತರಿಗೆ ಕೊಂಡೊಯ್ಯಲು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಯುವಕರಿಗೆ ಹಾಗೂ ಮಹಿಳೆಯರಿಗೆ ಉದ್ಯೋಗ ಅವಕಾಶಗಳನ್ನು ಕಲ್ಪಿಸುವ ಉದ್ದೇಶದಿಂದ ನವದೆಹಲಿಯಲ್ಲಿರುವ ಭಾರತೀಯ ಕೃಷಿ ಅನುಸಂಧಾನ ಪರಿಷತ್, ಪ್ರತಿ ಜಿಲ್ಲೆಗಳಲ್ಲಿ ಕೃಷಿ ವಿಜ್ಞಾನ ಕೇಂದ್ರಗಳನ್ನು ಸ್ಥಾಪಿಸಿದೆ. ಈ ಕೇಂದ್ರಗಳು ದೇಶದ ಕೃಷಿ ಮತ್ತು ಕೃಷಿ ಪೂರಕ ಉತ್ಪನ್ನಗಳನ್ನು ಹೆಚ್ಚಿಸುವುದರ ಜೊತೆಗೆ ರೈತರ ಸಾಮಾಜಿಕ ಮತ್ತು ಆರ್ಥಿಕ ಮಟ್ಟವನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರವಹಿಸಿವೆ.

ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗದ ವ್ಯಾಪ್ತಿಯಲ್ಲಿ ಬರುವ ಕೃಷಿ ವಿಜ್ಞಾನ ಕೇಂದ್ರ, ಶಿವಮೊಗ್ಗವು ಸಂಶೋಧನಾ ಕೇಂದ್ರದ ಹೆಚ್ಚುವರಿ ಕಾರ್ಯವಾಗಿ ಮಾರ್ಚ್ 2000 ರಲ್ಲಿ ಪ್ರಾರಂಭವಾಗಿ ನಂತರ ಏಪ್ರಿಲ್ 2004 ರಿಂದ ಪೂರ್ಣ ಪ್ರಮಾಣದ ಕೃಷಿ ವಿಜ್ಞಾನ ಕೇಂದ್ರವಾಗಿ ಕಾರ್ಯ ನಿರ್ವಹಿಸುತ್ತಿದೆ. ಈ ಕೇಂದ್ರವು ಶಿವಮೊಗ್ಗ ನಗರದಿಂದ 5 ಕಿ.ಮೀ. ದೂರದಲ್ಲಿದ್ದು ಜಿಲ್ಲೆಯ ಎಲ್ಲಾ 7 ತಾಲ್ಲೂಕುಗಳು ಸಹ ಇದರ ಕಾರ್ಯವ್ಯಾಪ್ತಿಯಲ್ಲಿವೆ.

ನವದೆಹಲಿಯ ಭಾರತೀಯ ಕೃಷಿ ಅನುಸಂಧಾನ ಪರಿಷತ್‍ನಿಂದ ಪೂರ್ಣ ಪ್ರಮಾಣದ ಹಣಕಾಸಿನ ಅನುದಾನವು ದೊರೆಯುತ್ತಿದೆ. ಕೃಷಿ ವಿಜ್ಞಾನ ಕೇಂದ್ರವು ತನ್ನದೇ ಆದ ವೈಜ್ಞಾನಿಕ ಸಲಹಾ ಸಮಿತಿಯನ್ನು ಹೊಂದಿರುತ್ತದೆ. ಈ ಸಮಿತಿಯಲ್ಲಿ ಜಿಲ್ಲೆಯ ವಿವಿಧ ಇಲಾಖೆಗಳ ಮುಖ್ಯಸ್ಥರುಗಳು, ಪ್ರಗತಿಪರ ರೈತರು ಮತ್ತು ರೈತ ಮಹಿಳೆಯರು ಸದಸ್ಯರಾಗಿರುತ್ತಾರೆ. ಕೇಂದ್ರವು 10 ಜನ ತಾಂತ್ರಿಕ ಹಾಗೂ 6 ಜನ ಸಹಾಯಕ ಸಿಬ್ಬಂದಿ ಮತ್ತು 50 ಎಕರೆ ಭೂಮಿಯನ್ನು ಹೊಂದಿರುತ್ತದೆ.

ಕೇಂದ್ರದ ವೈಶಿಷ್ಟ್ಯತೆ

ಮಲೆನಾಡು ಜಿಲ್ಲೆಯಾದ ಶಿವಮೊಗ್ಗದಲ್ಲಿ ಕುಡಿಯೊಡೆದಿರುವ ಈ ಕೃಷಿ ವಿಜ್ಞಾನ ಕೇಂದ್ರವು ತನ್ನದೇ ಆದ ವಿಶಿಷ್ಟ ಸ್ಥಾನವನ್ನು ಹೊಂದಿದೆ. ಈ ಕೇಂದ್ರದಲ್ಲಿ ಕಾರ್ಯಾನುಭವವೇ ತರಬೇತಿಯ ಮುಖ್ಯ ಉದ್ದೇಶ. ತರಬೇತಿ ಪಡೆಯುವವರು ಕೌಶಲ್ಯವನ್ನು ಮಾಡುತ್ತಾ ಕಲಿಯುವರು. ಕೇಂದ್ರದಲ್ಲಿ ಉಪನ್ಯಾಸ ಜ್ಞಾನವನ್ನು ಒದಗಿಸುವುದರ ಜೊತೆಗೆ ಸಂಶೋಧನಾ ತಾಕುಗಳಿಗೆ ಮತ್ತು ಪ್ರಗತಿಪರ ರೈತರ ಜಮೀನುಗಳ ವೀಕ್ಷಣೆ ಮಾಡಿಸಲಾಗುವುದು. ತರಬೇತುದಾರರಾಗಿರುವುದರಿಂದ ಕೃಷಿಯಲ್ಲಿ ಅಭಿವೃದ್ಧಿಪಡಿಸಿದ ಇತ್ತೀಚಿನ ಸಂಶೋಧನೆಯ ಫಲ ಶಿಕ್ಷಣಾರ್ಥಿಗಳಿಗೆ ನೇರವಾಗಿ ತಲುಪುವುದು ಮತ್ತು ವಿಜ್ಞಾನಿಗಳಿಂದ ರೈತರ ಸಮಸ್ಯೆಗಳಿಗೆ ನೇರ ಪರಿಹಾರ ಸಿಗುತ್ತದೆ. ಇಲ್ಲಿಯ ತರಬೇತಿ ಕಾರ್ಯಕ್ರಮಗಳು ಎಲ್ಲಾ ಶೈಕ್ಷಣಿಕ ಪದ್ಧತಿಗಳನ್ನು ಉಪಯೋಗಿಸಿಕೊಂಡು ತರಬೇತಿ ಪಡೆಯುವವರಲ್ಲಿ ಕಾರ್ಯದಕ್ಷತೆಯನ್ನು ಅಭಿವೃದ್ಧಿಪಡಿಸುವುದರ ಜೊತೆಗೆ ಕಾರ್ಯ ಚಾತುರ್ಯತೆಗಳನ್ನು ಕಲಿಯುವ ಹಾಗೂ ಸಮಸ್ಯೆಗಳನ್ನು ಬಿಡಿಸುವ ಆತ್ಮವಿಶ್ವಾಸವನ್ನು ಹೊಂದುವಂತಹ ವೃತ್ತಿಯನ್ನು ಬೆಳೆಸುವುದು. ಈ ಕೇಂದ್ರವು ನಿರಂತರವಾಗಿ ಸ್ಥಳೀಯ ಅವಶ್ಯಕತೆಗಳಿಗೆ ಅನುಗುಣವಾಗಿ ಹಾಗೂ ಸ್ಥಳೀಯ ಸಮಸ್ಯೆಗಳನ್ನು ಆಧರಿಸಿ ವೃತ್ತಿನಿರತ ರೈತರು, ರೈತ ಮಹಿಳೆಯರು, ಗ್ರಾಮೀಣ ಯುವಕರು, ಕೃಷಿ ಕಾರ್ಮಿಕರು ಹಾಗೂ ಅಭಿವೃದ್ಧಿ ಇಲಾಖೆ ವಿಸ್ತರಣಾ ಸಿಬ್ಬಂದಿಗಳಿಗೆ ತರಬೇತಿ ನೀಡುತ್ತಾ ಬಂದಿದೆ. ಕೃಷಿ ಮತ್ತು ಕೃಷಿಯೇತರ ವಿಷಯಗಳಲ್ಲಿ ಸೂಕ್ತ ತಂತ್ರಜ್ಞಾನವನ್ನು ಗುರುತಿಸುವ ಉದ್ದೇಶದಿಂದ ರೈತರ ತಾಕುಗಳಲ್ಲಿ ಸ್ಥಳ ನಿರ್ದಿಷ್ಟ ತಂತ್ರಜ್ಞಾನಗಳನ್ನು ಪರೀಕ್ಷಿಸುವ ಜೊತೆಗೆ ನವೀನ ತಾಂತ್ರಿಕತೆಗಳನ್ನು ಮುಂಚೂಣಿ ಪ್ರಾತ್ಯಕ್ಷಿಕೆಗಳ ಮೂಲಕ ಕೃಷಿಕರಿಗೆ ಪರಿಚಯಿಸುತ್ತಾ ಈ ಕೇಂದ್ರವು ರೈತರ ಜ್ಞಾನವರ್ಧಿನಿ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದೆ.

ಕೃಷಿ ವಿಜ್ಞಾನ ಕೇಂದ್ರದ ಪ್ರಮುಖ ಕಾರ್ಯ ಚಟುವಟಿಕೆಗಳು

 ಸ್ಥಳ ನಿರ್ಧಿಷ್ಟ, ಸುಸ್ಥಿರ ಭೂಬಳಕೆ ವ್ಯವಸ್ಥೆಗೆ ಸೂಕ್ತ ತಂತ್ರಜ್ಞಾನವನ್ನು ಮರುಪರಿಶೀಲನೆಗೆ ರೈತರ ತಾಕುಗಳಲ್ಲಿ ತಂತ್ರಜ್ಞಾನ ಪರೀಕ್ಷೆಗಳನ್ನು ಏರ್ಪಡಿಸುವುದು.  ಉತ್ಪನ್ನ ಮಾಹಿತಿ ಪಡೆಯಲು ಹಾಗೂ ರೈತರ ಅಭಿಪ್ರಾಯ ತಿಳಿಯಲು ವಿವಿಧ ಬೆಳೆಗಳ ಮತ್ತು ಉದ್ಯಮಗಳ ಮುಂಚೂಣಿ ಪ್ರಾತ್ಯಕ್ಷಿಕೆಗಳನ್ನು ರೈತರ ತಾಕುಗಳಲ್ಲಿ ಏರ್ಪಡಿಸುವುದು.  ರೈತರಿಗೆ ಮತ್ತು ವಿಸ್ತರಣಾ ಕಾರ್ಯಕರ್ತರಿಗೆ ಅವಶ್ಯಕತೆ ಅನುಸಾರವಾಗಿ ನೂತನ ತಂತ್ರಜ್ಞಾನ ಹಾಗೂ ಮರುಪರಿಶೀಲನೆ, ಪ್ರಾತ್ಯಕ್ಷಿಕೆಗಳ ಮೂಲಕ ತರಬೇತಿ ಕಾರ್ಯಕ್ರಮಗಳನ್ನು ಏರ್ಪಡಿಸುವುದು.  ನೂತನ ಕೃಷಿ ತಂತ್ರಜ್ಞಾನಗಳ ಜಾಗೃತಿಗಾಗಿ ಹಲವಾರು ಸೂಕ್ತ ವಿಸ್ತರಣಾ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು.  ರೈತರ ಅಗತ್ಯಕ್ಕನುಗುಣವಾಗಿ ಗುಣಮಟ್ಟದ ಬೀಜ, ಕಸಿಗಿಡಗಳು, ಜಾನುವಾರು ತಳಿಗಳು, ಪ್ರಾಣಿಜನ್ಯ ಉತ್ಪನ್ನಗಳು ಮತ್ತು ಜೈವಿಕ ಉತ್ಪನ್ನಗಳನ್ನು ಒದಗಿಸುವುದು.  ಜಿಲ್ಲೆಯ ಕೃಷಿ ಆರ್ಥಿಕತೆಯ ಅಭಿವೃದ್ಧಿಗಾಗಿ ಶ್ರಮಿಸುವ ಸರ್ಕಾರಿ, ಖಾಸಗೀ ಹಾಗೂ ಸ್ವಯಂ ಪ್ರೇರಿತ ಸಂಸ್ಥೆಗಳಿಗೆ ಅಗತ್ಯವಿರುವ ಕೃಷಿ ತಂತ್ರಜ್ಞಾನಗಳ ಮಾಹಿತಿ ಹಾಗೂ ಸಂಪನ್ಮೂಲ ಕೇಂದ್ರವಾಗಿ ಕಾರ್ಯನಿರ್ವಹಿಸುವುದು.

ನಮ್ಮ ಸಾಮಾಜಿಕ ಜಾಲತಾಣ Our Social Media Network